
ಎಮ್.ಕೆ. ಹುಬ್ಬಳ್ಳಿ, ನವೆಂಬರ್ 27: ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬಿನ ಸಿಹಿ ವಾಸನೆ ಬದಲು ಅಕ್ರಮದ ಘಾಟು ಹರಡುತ್ತಿದೆ! ಕಳೆದ 4 ವರ್ಷಗಳಲ್ಲಿ ಈ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಸುಮಾರು 70 ಕೋಟಿಯಷ್ಟು ಹಣ ಕಾರ್ಖಾನೆ ಬೊಕ್ಕಸ ಬದಲು ಲೂಟಿಯಾಗಿದೆ! ರೈತರ, ಕಾನೂನಿನ ಕಣ್ಣಿಗೆ ಮಣ್ಣೆರಚಿ ಕೋಟ್ಯಂತರ ಹಣ ದೋಚಲಾಗಿದೆ ಅನ್ನುವ ಆರೋಪ ವ್ಯಕ್ತವಾಗಿದೆ.
ಕಳೆದ ತಿಂಗಳಷ್ಟೇ ವಿವಿಧ ರೈತ ಸಂಘಟನೆಗಳು ಕಾರ್ಖಾನೆಯ ಆವರಣದಲ್ಲಿ ಒಂದುವಾರ ನಿರಂತರ ಹೋರಾಟ ಕೈಗೊಂಡು, ಕಾರ್ಖಾನೆಯಲ್ಲಿ ಕೋಟ್ಯಂತರ ಹಣ ದುರುಪಯೋಗವಾಗಿದೆ, ಈ ಅಕ್ರಮ ಕುರಿತು ಉನ್ನತ ತನಿಖಾ ಸಂಸ್ಥೆಗೆ ಪ್ರಕರಣ ನೀಡಬೇಕು ಅಂತ ಒತ್ತಾಯಿಸಿದ್ದರು. ಇದೀಗ ಮತ್ತೆ ರೈತ ಸಂಘಟನೆ ಮಹಾ ಒಕ್ಕೂಟದ ಮುಖಂಡರಾದ ಬಸವರಾಜ ಮತ್ತು ಬಸನಗೌಡ ಸೇರಿದಂತೆ ವಿವಿಧ ರೈತ ಸಂಘಟನೆಗಳು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ, ಹಗರಣ ಕುರಿತು ದಾಖಲಾತಿ ಸಮೇತ ತನಿಖೆಗೆ ಆಗ್ರಹಿಸಿದ್ದಾರೆ.
ಕಳೆದ ವರ್ಷ ಶೇ.13ರಷ್ಟು ಬರುವ ಕಬ್ಬಿನ ರಿಕವರಿಯಲ್ಲಿ ಕೇವಲ 9.23%ರಷ್ಟು ಮಾತ್ರ ದಾಖಲಿಸಿ 17ಕೋಟಿ ಮೌಲ್ಯದ ಸಕ್ಕರೆಯನ್ನು ಅಕ್ರಮವಾಗಿ ಸಾಗಿಸಲಾಗಿದೆ. 2021ರಲ್ಲಿ ಅಕ್ರಮವಾಗಿ ರವಾನಿಸುತ್ತಿದ್ದ 4 ಲಾರಿ ಸಕ್ಕೆರೆಯನ್ನು ತಹಶೀಲ್ದಾರ್ ವಶಕ್ಕೆ ಪಡೆದುಕೊಂಡು ವರದಿ ನೀಡಿದರು ಜಿಲ್ಲಾಡಳಿತ ಹಗರಣ ಕುರಿತು ಕಾನೂನಾತ್ಮಕ ಕ್ರಮ ಕೈಗೊಂಡಿಲ್ಲ ಎಂದು ರೈತ ಸಂಘಟನೆ ಮಹಾ ಒಕ್ಕೂಟದ ರಾಜ್ಯ ಕಾರ್ಯಧ್ಯಕ್ಷ ಬಸನಗೌಡ ಆರೋಪಿಸಿದ್ದಾರೆ.