
ಬೆಳಗಾವಿ, ಜನವರಿ 20: ಕಾಂಗ್ರೆಸ್ ಪಕ್ಷದಲ್ಲಿ ನಾಯಕರ ನಡುವಿನ ಒಳಮುನಿಸು ಕಡಿಮೆ ಆದಂತೆ ಕಾಣಿಸುತ್ತಿಲ್ಲ. ಕಳೆದೆರಡು ದಿನಗಳಿಂದ ಡಿಸಿಎಂ ಡಿಕೆ ಶಿವಕುಮಾರ್ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿದ್ದಾರೆ.
ಆದರೆ ಒಮ್ಮೆಯೂ ಅವರನ್ನು ಭೇಟಿಯಾಗಲು ಸಚಿವ ಸತೀಶ್ ಜಾರಕಿಹೊಳಿ ಮನಸು ಮಾಡಿಲ್ಲ. ಕಾಮಗಾರಿಗಳ ಉದ್ಘಾಟನೆ ನೆಪ ಹೇಳಿಕೊಂಡು ತಪ್ಪಿಸಿಕೊಳ್ಳುತ್ತಿದ್ದಾರೆ. ಹೀಗೆ ಅಂತರ ಕಾಯ್ದುಕೊಳ್ಳುತ್ತಲೇ ಮುನಿಸು ಹೊರಹಾಕುತ್ತಿದ್ದಾರಾ ಎಂಬ ಚರ್ಚೆ ಕಾಂಗ್ರೆಸ್ ಆಂತರಿಕ ವಲಯದಲ್ಲಿ ಗರಿಗೆದರಿದೆ.
ಮತ್ತೊಂದೆಡೆ, ಸತೀಶ್ ಜಾರಕಿಹೊಳಿ ಆಪ್ತ ವಲಯದಲ್ಲಿ ಕಾಣಿಸಿಕೊಂಡ ಶಾಸಕರು ದುಬೈ ಪ್ರವಾಸಕ್ಕೆ ಯೋಜಿಸಿದ್ದಾರೆ. ನಾಲ್ಕೈದು ದಿನಗಳ ಕಾಲ ವಿದೇಶಕ್ಕೆ ಹಾರಲು ಸಜ್ಜಾಗಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಡಿಕೆ ಶಿವಕುಮಾರ್ ಭಾನುವಾರ ಸತೀಶ್ ಆಪ್ತ ಆಸೀಫ್ ಸೇಠ್ ನಿವಾಸಕ್ಕೆ ಭೇಟಿಕೊಟ್ಟಿದ್ದಾರೆ.
ಯಾರೆಲ್ಲಾ ಪ್ರವಾಸಕ್ಕೆ ಹೋಗುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಈ ಮಾತಿಗೆ ಸಮಾಜಾಯಿಸಿ ಕೊಟ್ಟ ಸೇಠ್, ಪ್ಲ್ಯಾನ್ ಮಾಡಿದ್ದೇವೆ. ನಿಮಗೆ ಹೇಳದೇ ಹೋಗಲ್ಲ ಎಂದು ಉತ್ತರಿಸಿದ್ದಾರೆ. ಮುಂದುವರೆದ ಡಿಕೆ ಶಿವಕುಮಾರ್, ಪಕ್ಷದಲ್ಲಿದ್ದಾಗ ಶಿಸ್ತಿನಿಂದ ಇರುವಂತೆ ಪಾಠ ಮಾಡಿದ್ದಾರೆ.