
ಬೈಲಹೊಂಗಲ, ನವಂಬರ್ 29: ಕನ್ನಡ ಪರ ಸಂಘಟನೆಗಳ ಮೂಲಕ ಕಳೆದ ಎರಡು ದಶಕಗಳಿಂದಲೂ ಬೆಳಗಾವಿಯಲ್ಲಿ ಪ್ರತಿ ಕನ್ನಡಿಗನಿಗೂ ಚಿರಪರಿಚಿತರಾಗಿರುವ ಮಹಾದೇವ ತಳವಾರ ಅವರ ನೇತೃತ್ವದಲ್ಲಿ ಇಡೀ ಉತ್ತರ ಕರ್ನಾಟಕದ ಸ್ವಾಭಿಮಾನಿ ಕನ್ನಡಿಗರನ್ನು ಒಳಗೊಂಡು ಸಂಘಟಿಸಿರುವ ‘ಕಿತ್ತೂರು ಕರ್ನಾಟಕ ಸೇನೆ’ ವಿದ್ಯುಕ್ತವಾಗಿ ನಾಳೆ ಬೈಲಹೊಂಗಲದಲ್ಲಿ ಉದ್ಘಾಟನೆಯಾಗಲಿದೆ.
ಜನಪ್ರಿಯ ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ ಜಾರಕಿಹೊಳಿ ಸಂಘಟನೆಯ ಉದ್ಘಾಟನೆಯಲ್ಲಿ ಭಾಗಿಯಾಗಲಿದ್ದಾರೆ. ನವಂಬರ್ ೩೦ ಹಾಗೂ ಡಿಸೆಂಬರ್ ೧ ರಂದು ಎರಡು ದಿನಗಳ ಕಾಲ ಜರುಗಲಿರುವ ಈ ಕಾರ್ಯಕ್ರಮಗಳಲ್ಲಿ ನಾಡಿನ ಅನೇಕ ಪ್ರಮುಖರು ಪೂಜ್ಯರು ಜನಪ್ರತಿನಿಧಿಗಳು ಕಲಾವಿದರು ಆಗಮಿಸಲಿದ್ದಾರೆ.
ನಾಳೆ ೩೦ ರಂದು ವೀರರಾಣಿ ಕಿತ್ತೂರು ಚೆನ್ನಮ್ಮ ಲಿಂಗೈಕ್ಯ ಉದ್ಯಾನವನದಲ್ಲಿ ಸಂಜೆ ೫ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕೂಡಲ ಸಂಗಮದ ಬಸವ ಜಯ ಮೃತ್ಯುಂಜಯ ಶ್ರೀಗಳು, ಆರಾದ್ರಿಮಠದ ಶ್ರೀಗಳು ಸೇರಿದಂತೆ ಬೈಲಹೊಂಗಲ ಕಿತ್ತೂರು ಸವದತ್ತಿ ಶಾಸಕರು ಮಾಜಿ ಶಾಸಕರುಗಳು ಭಾಗಿಯಾಗಲಿದ್ದಾರೆ.
ಡಿ. ೦೧ ರಂದು ಜರುಗಲಿರುವ ಕಾರ್ಯಕ್ರಮದಲ್ಲಿ ಬೈಲಹೊಂಗಲ ಮೂರು ಸಾವಿರ ಮಠದ ಪೂಜ್ಯರು, ಕುಂದರಗಿ-ಅಂಕಲಗಿ ಅಡವಿ ಸಿದ್ದೇಶ್ವರ ಮಠದ ಪೂಜ್ಯರು, ಸಾನಿಧ್ಯ ವಹಿಸಲಿದ್ದಾರೆ.ಹಿರಿಯ ಪತ್ರಕರ್ತ ಈಶ್ವರ ಹೋಟಿ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಶಾಸಕ ವಿ.ಐ ಪಾಟೀಲ ಉದ್ಘಾಟನೆ ಮಾಡಲಿದ್ದಾರೆ.
ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ಮಾಜಿ ಶಾಸಕ ವಿ.ಐ ಪಾಟೀಲ, ಮಹಾಂತೇಶ ದೊಡ್ಡಗೌಡರ, ಬೈಲಹೊಂಗಲ, ವಿಜಯ ಮೆಟಗುಡ್ಡ, ಶಂಕರ ಮಾಡಲಗಿ, ಸಿಕೆ ಮೆಕ್ಕೇದ, ವಿಜಯ ಬೋಳಣ್ಣವರ, ಶ್ರೀಶೈಲ ಯಡಳ್ಳಿ, ಹಾಗೂ ಕಿತ್ತೂರು ಭಾಗದ ಅನೇಕ ಪ್ರಮುಖರು ಸ್ವಾಭಿಮಾನಿ ಕನ್ನಡಿಗರು ಭಾಗಿಯಾಗಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಸ್ವಾಭಿಮಾನಿ ಕನ್ನಡಿಗರು ಭಾಗಿಯಾಗಿ ಕನ್ನಡದ ಮನಸ್ಸುಗಳಿಗೆ ಬೆಂಬಲ ಸೂಚಿಸುವಂತೆ ರಾಜ್ಯ ಸಂಚಾಲಕ ಮಹಾದೇವ ತಳವಾರ ಕೋರಿದ್ದಾರೆ.