
ಬೆಂಗಳೂರು, ಅಕ್ಟೋಬರ್ 29: ಪವರ್ ಸ್ಟಾರ್, ಯುವರತ್ನ, ನಗುಮೊಗದ ಒಡೆಯ, ಚಂದನವನದ ರಾಜಕುಮಾರ!
ಹೀಗೆ ಸಾಕಷ್ಟು ಹೆಸರುಗಳಿಂದ ಕರೆಸಿಕೊಳ್ಳುತ್ತಿದ್ದ ಪುನೀತ್ ರಾಜ್ಕುಮಾರ್ ಕೊನೆ ಬಾರಿ ಉಸಿರಾಡಿದ ದಿನವದು. ಆದ್ರೆ ಅವರ ನೆನಪು ಮಾತ್ರ ಇಂದಿಗೂ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದೇ ಉಳಿದಿದೆ. ಇಂದು ಅವರ ಮೂರನೇ ಪುಣ್ಯಸ್ಮರಣೆ ನಡೆಯುತ್ತಿದೆ.
ಇಂದು ಪುನೀತ್ ರಾಜ್ಕುಮಾರ್ ಅವರ ಮೂರನೇ ಪುಣ್ಯಸ್ಮರಣೆ ಹಿನ್ನೆಲೆ, ವಿವಿಧೆಡೆ ವಿವಿಧ ಪುಣ್ಯಕಾರ್ಯಗಳು ಜರುಗುತ್ತಿವೆ. ಅಪ್ಪುನನ್ನು ಸ್ಮರಿಸುವ ಕಾರ್ಯ ಮುಂದುವರಿದಿವೆ.
ಈಗಾಗಲೇ ಹಲವೆಡೆ ಪುನೀತ್ ರಾಜ್ಕುಮಾರ್ ಹೆಸರಲ್ಲಿ ದೇಗುಲಗಳು ನಿರ್ಮಾಣಗೊಂಡಿವೆ. ಇದು ಅಭಿಮಾನಿಗಳ ಅಭಿಮಾನಕ್ಕೆ ಹಿಡಿದ ಕೈಗನ್ನಡಿ.
ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಯನ್ನು ಹೂವಿನಿಂದ ಅಲಂಕೃತ ಮಾಡಲಾಗಿದೆ. ಅಪ್ಪುನ ನೆನಪುಮಾಡಿಕೊಳ್ಳಲು ಫ್ಯಾನ್ಸ್ ನೆರೆದಿದ್ದಾರೆ. ಕುಟುಂಬದವರು ಬಂದು ಇಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಲಿದ್ದಾರೆ.