
ಬೆಳಗಾವಿ: 05: ಕೇಂದ್ರ ನಗರಾಭಿವೃದ್ಧಿ ಸಚಿವರಾದ ಮಾನ್ಯ ಶ್ರೀ ಮನೋಹರ ಲಾಲ್ ರವರ ಪಸ್ಥಿತಿಯಲ್ಲಿ ರಾಜಸ್ಥಾನದ ಜೈಪುರದಲ್ಲಿ ನಡೆದ ಸಮಾವೇಶದಲ್ಲಿ ಬೆಳಗಾವಿ ನಗರದ ಘನತ್ಯಾಜ್ಯ ನಿರ್ವಹಣೆಯ CITIIS 2.O VIISWAS (Vision to Implement Integrated Solid Waste management and Sustainability) ಯೋಜನೆಯ ಚತುರ್ಭುಜ ಒಪ್ಪಂದಕ್ಕೆ ಪರಸ್ಪರ ಸಹಿ ಹಾಕುವ ಮೂಲಕ ಬೆಳಗಾವಿ ನಗರಕ್ಕೆ ರೂ.135 ಕೋಟಿ ಅನುದಾನ ಮಂಜೂರಾಗಿದೆ. ಕಂದ್ರ ಸರ್ಕಾರದ ಸ್ಮಾರ್ಟಸಿಟಿ ಯೋಜನೆಗಳಿಗೆ CITIIS 2.O ಚಾಲೆಂಜ್ ಆಹ್ವಾನಿಸಲಾಗಿತ್ತು ಅದರಲ್ಲಿ ದೇಶದ ಒಟ್ಟು 84 ನಗರಗಳು ಭಾಗಿಯಾಗಿದ್ದವು.
ಬೆಳಗಾವಿ ಸ್ಮಾರ್ಟಸಿಟಿ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಆಕರ್ಷಕ ಪ್ರಸ್ತಾವಣೆ ಸಿದ್ದಪಡಿಸಿ ಸಲ್ಲಿಸಲಾಗಿತ್ತು. ಮಾರ್ಚ-2024 ರಲ್ಲಿ ಈ ಕುರಿತು ತೀರ್ಪುಗಾರ ತಂಡದ ಮುಂದೆ ಬೆಳಗಾವಿ ಸ್ಮಾರ್ಟಸಿಟಿ ವ್ಯವಸ್ಥಾಪಕ ನಿರ್ದೇಶಕಿ ಸೈಯದಾ ಆಫ್ರೀನ್ ಬಾನು ಬಳ್ಳಾರಿ ಇವರು ವಿಸ್ತೃತ ಯೋಜನಾ ವರದಿಯನ್ನು ಪ್ರಸ್ತುತಪಡಿಸಿದ್ದರು.
ಅಂತಿಮವಾಗಿ CITIIS 2.O ಚಾಲೆಂಜಿನಲ್ಲಿ ದೇಶದ 18 ನಗರಗಳನ್ನು ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಬೆಳಗಾವಿಯೂ ಒಂದಾಗಿದೆ ಮತ್ತು ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಏಕೈಕ ನಗರವಾಗಿದೆ. ಪ್ರಯುಕ್ತ ಇತ್ತೀಚೆಗೆ ರಾಜಸ್ಥಾನದ ಜೈಪುರದಲ್ಲಿ ನಡೆದ ಸಮಾವೇಶದಲ್ಲಿ ಕೇಂದ್ರ ನಗರಾಭಿವೃದ್ಧಿ ಮಂತ್ರಾಲಯ, ರಾಜ್ಯ ಪ್ರತಿನಿಧಿ ಕೆಯುಐಡಿಎಫ್.ಸಿ ಬೆಂಗಳೂರು, ಸ್ಮಾರ್ಟಸಿಟಿ ಬೆಳಗಾವಿ ಹಾಗೂ ಮಹಾನಗರ ಪಾಲಿಕೆ ಬೆಳಗಾವಿ ನಡುವೆ ಚತುರ್ಭುಜ (Quadrilateral Agreement) ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಬೆಳಗಾವಿ ಸ್ಮಾರ್ಟಸಿಟಿಯಿಂದ ನಗರದ ಘನತ್ಯಾಜ್ಯ ನಿರ್ವಹಣೆಗೆ ವಿಭಿನ್ನವಾದ ರೂಪುರೇಷೆ ಸಿದ್ದಪಡಿಸಲಾಗಿದ್ದು ಯೋಜನೆ ಅನುಷ್ಠಾನಕ್ಕೆ 03 ವರ್ಷಗಳ ಕಾಲಾವಧಿ ನಿಗದಿಪಡಿಸಲಾಗಿದೆ ಇದಕ್ಕಾಗಿ ರೂ.135 ಕೋಟಿ ಅನುದಾನ ಒದಗಿಸಲಾಗಿದ್ದು ಮಾರ್ಚ್-2028ಕ್ಕೆ ಯೋಜನೆ ಮುಕ್ತಾಯವಾಗಲಿದೆ.
ಒಪ್ಪಂದಕ್ಕೆ ಸಹಿ ಹಾಕುವ ವೇಳೆ ಕೇಂದ್ರ ನಗರ ವ್ಯವಹಾರಗಳ ಇಲಾಖೆಯ ಶ್ರೀಮತಿ ರೂಪಾ ಮಿಶ್ರಾ, ಭಾ.ಆ.ಸೇ, ಕರ್ನಾಟಕ ಮೂಲ ಸೌಲಭ್ಯ ಹಾಗೂ ಹಣಕಾಸು ಸಂಸ್ಥೆ ಬೆಂಗಳೂರು ಕಛೇರಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶರತ್, ಭಾ.ಆ.ಸೇ, ಬೆಳಗಾವಿ ಸ್ಮಾರ್ಟಸಿಟಿ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಸೈಯದಾ ಆಫ್ರೀನ್ ಬಾನು ಬಳ್ಳಾರಿ, ಕ.ಆ.ಸೇ, ಹಾಗೂ ಶ್ರೀಮತಿ. ಶುಭಾ ಬಿ, ಆಯುಕ್ತರು, ಮಹಾನಗರ ಪಾಲಿಕೆ, ಬೆಳಗಾವಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.