
ಲಕ್ನೋದಿಂದ ಮುಂಬೈಗೆ ತೆರಳುತ್ತಿದ್ದ ಪುಷ್ಪಕ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಸುದ್ದಿ ಹರಡಿತು. ಇದರಿಂದ ಆತಂಕಗೊಂಡ ಪ್ರಯಾಣಿಕರು ತಮ್ಮ ಪ್ರಾಣ ಉಳಿಸಿಕೊಳ್ಳಲು ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಜಂಪ್ ಮಾಡಿದ್ದಾರೆ.
ಜಂಪ್ ಮಾಡಿದವರ ಪೈಕಿ 12 ಪ್ರಯಾಣಿಕರ ದೇಹಗಳು ಛಿದ್ರಗೊಂಡಿವೆ.ಆಗ್ ಲಗ್ ಗಯಿ, ಆಗ್ ಲಗ್ ಗಯಿ. ಬೆಂಕಿ ಬಿದ್ದಿದೆ, ಬೆಂಕಿ ಬಿದ್ದಿದೆ ಎಂಬ ಸುಳ್ಳು ಮಾತಿನಿಂದ ರೈಲು ಪ್ರಯಾಣಿಕರು ಬಲಿಯಾಗಿದ್ದಾರೆ. ಸಂಜೆ 5 ಗಂಟೆ, ಪುಷ್ಪಕ್ ಎಕ್ಸ್‌ಪ್ರೆಸ್, ಉತ್ತರ ಪ್ರದೇಶದ ಲಕ್ನೋದಿಂದ ಮುಂಬೈಗೆ ಬಂದು ಸೇರಬೇಕಿತ್ತು. ಮಹಾರಾಷ್ಟ್ರ ಜಲಗಾಂವ್ಗೆ ತಲುಪುತ್ತಿದ್ದಂತೆ ರೈಲಿನಿಂದ ಬಿಸಿ ಗಾಳಿ ಬಂದಿದೆ.
ಈ ಬಿಸಿಗಾಳಿಯನ್ನೇ ಪ್ರಯಾಣಿಕರು ಬೆಂಕಿ ಎಂದು ಭಾವಿಸಿ ಚೈನ್ ಎಳೆದು ರೈಲು ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಬೆಂಕಿ ಅಪಾಯದಿಂದ ಪಾರಾಗಲು ರೈಲಿನಿಂದ ಕೆಳಕ್ಕೆ ಜಿಗಿದವರು ಸೀದ ಯಮಲೋಕಕ್ಕೆ ಹೋಗಿ ಸೇರಿದ್ದಾರೆ.
ಮುಂಬೈನಿಂದ 400 ಕಿ.ಮೀ ದೂರದಲ್ಲಿರುವ ಪಚೋರಾ ಬಳಿಯ ಮಹೇಜಿ ಮತ್ತು ಪರ್ಧಾಡೆ ನಿಲ್ದಾಣಗಳ ನಡುವೆ ಅಪಘಾತ ಸಂಭವಿಸಿದೆ. ಇನ್ನು ಅಪಘಾತ ತಪ್ಪಿಸಲು ಎರಡೂ ರೈಲುಗಳ ಲೋಕೋ ಪೈಲಟ್ ಪ್ರಯತ್ನಿಸಿದ್ದಾರೆ.
ಪುಷ್ಪಕ್ ಎಕ್ಸ್‌ಪ್ರೆಸ್ನ ಲೋಕೋ ಪೈಲಟ್ ನಿಯಮದ ಪ್ರಕಾರ ಪ್ಲಾಷರ್ ಲೈಟ್ ಆನ್ ಮಾಡಿದ್ದಾರೆ. ಪ್ಲಾಷರ್ ಲೈಟ್ ನೋಡಿದ ಕೂಡಲೇ ಕರ್ನಾಟಕ ಎಕ್ಸ್ಪ್ರೆಸ್ನ ರೈಲಿನ ಲೋಕೋ ಪೈಲಟ್ ಬ್ರೇಕ್ ಹಾಕಿದ್ದಾರೆ. ಆದ್ರೆ, ಟ್ರ್ಯಾಕ್ ತಿರುವು ಇದ್ದ ಕಾರಣ ರೈಲಿನ ವೇಗ ಕಡಿಮೆ ಆಗಿಲ್ಲ. ಪರಿಣಾಮ ಟ್ರ್ಯಾಕ್ನ ಮೇಲೆ ಇದ್ದರ ಮೇಲೆ ಕರ್ನಾಟಕ ಎಕ್ಸ್ಪ್ರೆಸ್ ರೈಲು ಹರಿದಿದೆ.
ಈ ಅವಘಡದಲ್ಲಿ ಜೀವ ಕಳೆದುಕೊಂಡವರ ಸಂಖ್ಯೆ 12ಕ್ಕೆ ಏರಿಕೆ ಆಗಿದ್ದು, ಹಲವು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.ಈ ಅಪಘಾತದಲ್ಲಿ ಕಣ್ಮುಚ್ಚಿದ ವ್ಯಕ್ತಿಗಳ ಕುಟುಂಬಕ್ಕೆ ಮಹಾರಾಷ್ಟ್ರ ಸರ್ಕಾರ 5 ಲಕ್ಷ ಪರಿಹಾರ ಘೋಷಿಸಿದೆ. ಅಷ್ಟೇ ಅಲ್ಲದೆ ಗಾಯಗೊಂಡ ಪ್ರಯಾಣಿಕರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನ ಸರ್ಕಾರ ಭರಿಸಲಿದೆ ಅಂತಾ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಿಳಿಸಿದ್ದಾರೆ.