
ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಬಿಜೆಪಿ ಶಾಸಕ ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿ.ವೈ.ವಿಜಯೇಂದ್ರ ಅವರು ಪಕ್ಷದ ರಾಜ್ಯಾಧ್ಯಕ್ಷರಾದ ನಂತರವಂತೂ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ನೇರವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದಾರೆ.
ಇತ್ತೀಚೆಗೆ ನಡೆದ ಮೂರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತಳ ಕಚ್ಚಲು ಯತ್ನಾಳ ಅವರ ಈ ರೀತಿಯ ಪಕ್ಷ ವಿರೋಧಿ ಹೇಳಿಕೆಗಳೇ ಕಾರಣ ಅಂತ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ.
ಇದೇ ಡಿ. 09 ರಿಂದ ಬೆಳಗಾವಿಯಲ್ಲಿ ಜರುಗಲಿರುವ ಚಳಿಗಾಲದ ಅಧಿವೇಶನಕ್ಕೂ ಮುನ್ನ ಯತ್ನಾಳ ಅವರನ್ನು ಕಟ್ಟಿ ಹಾಕುವ ಪ್ರಯತ್ನಕ್ಕೆ ಮುಂದಾದ ಹೈ ಕಮಾಂಡ್ ಸೋತಿದ್ದು ಕಾರ್ಯಕರ್ತರು ಹಾಗೂ ಮುಖಂಡರ ನೇತೃತ್ವದಲ್ಲಿ ಮೈಸೂರಿನಲ್ಲಿ ಸಭೆ ನಡೆದ ಸಂದರ್ಭದಲ್ಲಿ ಯತ್ನಾಳ ಪರ ಮಾತನಾಡಿ ಮನವೊಲಿಸಲು ಪ್ರಯತ್ನಿಸಿದರೂ ಮೊದಲು ಯತ್ನಾಳ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ನಂತರ ರಾಜ್ಯ ಪ್ರವಾಸ ಕೈಗೊಳ್ಳಿ ಅನ್ನೋ ಸಲಹೆ ವ್ಯಕ್ತವಾಗಿದೆ.
ಇನ್ನಷ್ಟು ಗಟ್ಟಿಯಾಗಿ ಯುವಕರನ್ನು ಒಳಗೊಂಡಂತೆ ಪಕ್ಷ ಸಂಘಟನೆಗೆ ಸಲಹೆ ನೀಡಿದ ಹೈ ಕಮಾಂಡಗೆ ಕಾರ್ಯಕರ್ತರು ಹಾಗೂ ಮುಖಂಡರು ಯತ್ನಾಳ ಅವರ ಉಚ್ಛಾಟನೆ ಟಾರ್ಗೆಟ್ ನಿಗದಿಪಡಿಸಿದ್ದಾರೆ. ಪ್ರತಿಪಕ್ಷ ಬಿಜೆಪಿಗೆ ಆಡಳಿತ ಪಕ್ಷದ ಹಲವಾರು ವಿಷಯಗಳು ಹಾಗೂ ಲೋಪದೋಷಗಳನ್ನು ಎತ್ತಿ ಹಿಡಿಯುವ ಸದವಕಾಶ ಇದ್ದಾಗ್ಯೂ ಅಂತರಿಕ ಅಸಮಾಧಾನ ಬೇಗುದಿಗಳಿಂದಾಗಿ ಕೈ ಕಚ್ಚಿಕೊಂಡು ಕೂರುವ ಸ್ಥಿತಿ ನಿರ್ಮಾಣವಾಗಿದೆ.