
1924ರ ಕಾಂಗ್ರೆಸ್ ಅಧಿವೇಶನದ ಸ್ಥಳ ಘೋಷಣೆ ಹಿನ್ನಲೆ:1923ರ ಆಂಧ್ರಪ್ರದೇಶದ ಕಾಕಿನಾಡ ಕಾಂಗ್ರೆಸ್ ಅಧಿವೇಶನದಲ್ಲಿ ಮುಂದಿನ ಕಾಂಗ್ರೆಸ್ ಅಧಿವೇಶನವನ್ನು ಕರ್ನಾಟಕದಲ್ಲಿ ಮಾಡುವುದಾಗಿ ಘೋಷಿಸಲಾಯಿತು. ಕರ್ನಾಟಕ ಸದಾಶಿವರಾರು ಮಂಗಳೂರಿನಲ್ಲಿ ,ಕೌಜಿಲಗಿ ಹನುಮಂತರಾಯರು ಬಿಜಾಪುರದಲ್ಲಿ ,ಗಂಗಾಧರ್ ರಾವ್ ದೇಶಪಾಂಡೆ ಅವರು ಬೆಳಗಾವಿಯಲ್ಲಿ 1924ರ ಕಾಂಗ್ರೆಸ್ ಅಧಿವೇಶನ ಮಾಡಬೇಕೆಂದು ತಮ್ಮ ಹಕ್ಕೊತಾಯವನ್ನು 1923ರ ಕಾಂಗ್ರೆಸ್ ಅಧಿವೇಶನದಲ್ಲಿ ಮಂಡಿಸಿದರು. ಕೊನೆಗೆ ಯಾವುದೂ ತೀರ್ಮಾನಕ್ಕೆ ಬಾರದೆ ಇದ್ದಾಗ ಮತಕ್ಕೆ ಹಾಕಿ ಬೆಳಗಾವಿಯನ್ನು ಆಯ್ಕೆ ಮಾಡಲಾಯಿತು.

ಸ್ವಾಗತ ಸಮಿತಿ :ಗಂಗಾಧರ್ ರಾವ್ ದೇಶಪಾಂಡೆಯವರು ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದರು, ಪ್ರಧಾನ ಕಾರ್ಯದರ್ಶಿಗಳಾಗಿ ಮಾದವರಾವ್ ಕೆಂಭಾವಿ ,ಬಿ ಬಿ ಪೋದ್ದಾರ,ಎಸ್ ಎಲ್ ಸೋಮನ್ ಅವರು ಆಯ್ಕೆಯಾದರು. ಜೊತೆಗೆ 19 ಜನ ಉಪಾಧ್ಯಕ್ಷರು ಆಯ್ಕೆಯಾದರು.
ಕಾರ್ಯಕ್ರಮದ ಯಶಸ್ಸಿನ ರೂವಾರಿಗಳು: ಕಾರ್ಯಕ್ರಮದ ಯಶಸ್ವಿನ ರೂವಾರಿಗಳಾಗಿ ಹೊರಹೊಮ್ಮಿದವರು ಗಂಗಾಧರ ದೇಶಪಾಂಡೆ ಮತ್ತು ಹರ್ಡೇಕರ್ ಮಂಜಪ್ಪನವರು.
ಅಧಿವೇಶನದಲ್ಲಿ ಭಾಗಿಯಾದ ಗಣ್ಯ ನಾಯಕರುಗಳು: ಅಧಿವೇಶನದಲ್ಲಿ ಮಹಾತ್ಮ ಗಾಂಧೀಜಿ ,ಸರ್ದಾರ್ ವಲ್ಲಬಾಯ್ ಪಟೇಲ್ ,ಹಾಗೂ ರಾಜೇಂದ್ರ ಪ್ರಸಾದ್ ರಾಜಾಜಿ, ಮೋತಿಲಾಲ್ ನೆಹರು ,ಜವಹರ್ಲಾಲ್ ನೆಹರು, ಸರೋಜಿನಿ ನಾಯ್ಡು ,ಲಾಲಾ ಲಜಪತರಾಯ್, ಅಲಿ ಸಹೋದರರು ಭಾಗಿಯಾದ ಪ್ರಮುಖರಾಗಿದ್ದರು.

ಸಮ್ಮೇಳನದ ಪ್ರತಿನಿಧಿಗಳು: 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ದೇಶದ ಬೇರೆ ಬೇರೆ ರಾಜ್ಯಗಳಿಂದ 6234 ಪ್ರತಿನಿಧಿಗಳು ಬರುವ ನಿರೀಕ್ಷೆ ಇತ್ತು. ಆದರೆ ಒಟ್ಟು ಹಾಜರಾದ ಪ್ರತಿನಿಧಿಗಳು 1,844 .ಅದರಲ್ಲಿ ಅತಿ ಹೆಚ್ಚು ಆಂಧ್ರಪ್ರದೇಶದಿಂದ ಅಂದರೆ 299 ಪ್ರತಿನಿಧಿಗಳು ಭಾಗ್ಯವಹಿಸಿದ್ದರು. ಕರ್ನಾಟಕದಿಂದ 230 ಪ್ರತಿನಿಧಿಗಳು ಅಧಿವೇಶನದಲ್ಲಿ ಭಾಗಿಯಾಗಿದ್ದರು.
ಸಮ್ಮೇಳನದ ಸ್ಥಳದ ಆಯ್ಕೆ : ಬೆಳಗಾವಿಯ ಈಗಿನ ಟಿಳಕವಾಡಿಯ ಒಂದನೇ ಮತ್ತು ಎರಡನೇ ಗೇಟಿನ ಸುಮಾರು 85 ಎಕರೆ ವಿಸ್ತಾರವಾದ ಮೈದಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಮರಣೆಗಾಗಿ ವಿಜಯನಗರ ಎಂದು ಹೆಸರಿಟ್ಟು ಸ್ವಾಗತ ಮಂಟಪವನ್ನು ರಚಿಸಲಾಗಿತ್ತು .ಹಂಪಿಯ ವಿರೂಪಾಕ್ಷೇಶ್ವರ ದೇವಾಲಯದ ಗೋಪುರದ ಮಾದರಿಯಲ್ಲಿ ಸಮಾವೇಶದ ಸ್ವಾಗತ ಕಮಾನವನ್ನು ನಿರ್ಮಿಸಲಾಗಿತ್ತು. ಕಾರಣ ಇಷ್ಟೇ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಕಾಂಗ್ರೆಸ್ ಅಧಿವೇಶನದಲ್ಲಿ ಮತ್ತು ಸ್ವಾತಂತ್ರೋತ್ತರ ಭಾರತದಲ್ಲಿ ಮರು ಸೃಷ್ಟಿ ಮಾಡುವ ಉದ್ದೇಶವಾಗಿತ್ತು.
ಪಂಪಾ ಸರೋವರ ಅಥವಾ ಕಾಂಗ್ರೆಸ್ ಬಾವಿ:ಅಧಿವೇಶನಕ್ಕೆ ಆಗಮಿಸುವ ಪ್ರತಿನಿಧಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ 4370 ರೂಪಾಯಿ 3 ಆಣೆ ಕರ್ಚಿನಲ್ಲಿ 50#40#40 ಅಳತೆಯ ಬಾವಿಯನ್ನು ನಿರ್ಮಿಸಲಾಯಿತು. ಬಾವಿಯನ್ನು ತೊಡುವಾಗ ಹರಪನಹಳ್ಳಿ ಎನ್ನುವ ಹದಿಮೂರು ವರ್ಷದ ಬಾಲಕ ಕಾಲು ಜಾರಿ ಬಾವಿಯಲ್ಲಿ ಬಿದ್ದು ಅಸುನಿಗಿದ. ಪಕ್ಕದಲ್ಲಿಯೇ ಇದ್ದ ಬ್ರಿಟಿಷ ಕ್ಯಾಂಪಿನ ಅಧಿಕಾರಿಗಳು ನೀವು ಬಾವಿ ತೋಡಿದರೆ ನಮ್ಮ ಬ್ರೀಟಿಷ ಕ್ಯಾಂಪಿನ ಭಾವಿಯ ಸಲೆಗಳು ಬತ್ತಿ ನೀರು ಕಡಿಮೆಯಾಗುವುದು ಎಂದು ತಕರಾರು ಮಾಡಿದರು. ಆದರೆ ಅದ್ಯಾವುದನ್ನು ಲೆಕ್ಕಿಸದ ಸಮಿತಿಗಳು ಬಾವಿಯನ್ನು ಪೂರ್ಣ ಪ್ರಮಾಣದಲ್ಲಿ ತೋಡಿದರು .ಈ ಬಾವಿಗೆ ಪಂಪಾ ಸರೋವರ ಎಂದು ನಾಮಕರಣ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿಗೆ ಜಿಲ್ಲಾಡಳಿತ ಇದನ್ನು “ಕಾಂಗ್ರೆಸ್ ಬಾವಿ” ಎಂದು ಕರೆದು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಿ ಸುರಕ್ಷಿತವಾಗಿ ಸಂರಕ್ಷಣೆ ಮಾಡುತ್ತಿದೆ.
ಅಧ್ಯಕ್ಷರ ಆಯ್ಕೆ :ಬೆಳಗಾವಿ ಅಧಿವೇಶನಕ್ಕೆ ಅಧ್ಯಕ್ಷರನ್ನಾಗಿ ಯಾರನ್ನು ಆಯ್ಕೆ ಮಾಡಬೇಕು ಎಂಬ ಜಿಜ್ಞಾಸೆ ಮೂಡಿದಾಗ ಸರೋಜಿನಿ ನಾಯ್ಡು ಅವರತ್ತ ಚಿತ್ತ ಹೊರಳಿತ್ತು. ಆದರೆ ಅಸಹಕಾರ ಚಳುವಳಿಯಿಂದ ಜೈಲು ಸೇರಿದ ಮಹಾತ್ಮ ಗಾಂಧೀಜಿಯವರು ಅನಾರೋಗ್ಯದ ಕಾರಣ ಜೈಲಿನಿಂದ ಹೊರಗಡೆ ಬಂದಿದ್ದರು ಆಗ ಮಹಾತ್ಮ ಗಾಂಧೀಜಿಯವರನ್ನು ಕೇಳಿದಾಗ ಸಂತೋಷದಿಂದ ಒಪ್ಪಿಕೊಂಡರು.
ಗಾಂಧೀಜಿಯವರ ಖಾದಿ ನಿವಾಸ:ಕಾಂಗ್ರೆಸ್ ಅಧಿವೇಶನದಲ್ಲಿ ಭಾಗಿಯಾದ ಗಾಂಧೀಜಿಯವರ ವಾಸಕ್ಕೆ ಸಂಪೂರ್ಣವಾಗಿ ಖಾದಿಯಿಂದಲೇ ನಿರ್ಮಿಸಿದ ಒಂದು ಕುಟಿರವನ್ನು ನಿರ್ಮಿಸಲಾಗಿತ್ತು. ಇದನ್ನು ಮಹಾತ್ಮ ಗಾಂಧೀಜಿಯವರು ಖಾದಿಯ ಅರಮನೆ ಎಂದು ಕರೆದರು.
ಸಮಾವೇಶದ ಊಟೋಪಚಾರ :1924ರ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗಿಯಾಗುವ ಎಲ್ಲರಿಗೂ ರುಚಿ ಮತ್ತು ಶಿಚಿಯಾದ ಊಟದ ವ್ಯವಸ್ಥೆ ಮಾಡಲಾಗಿತ್ತು. ಏಕಕಾಲಕ್ಕೆ ನಾಲ್ಕು ಸಾವಿರ ಜನರು ಕೂಡ್ರುವಷ್ಟು ದೊಡ್ಡದಾದ ಪೆಂಡಾಲನ್ನು ಹಾಕಿಸಲಾಗಿತ್ತು ಸಮ್ಮೇಳನದಲ್ಲಿ ಭಾಗಿಯಾದ ಪ್ರತಿನಿಧಿಗಳಿಗೆ ಯಾವುದಕ್ಕೂ ಕೊರತೆ ಆಗದಂತೆ ಸಾಕಷ್ಟು ಮತ್ತು ಉಂಡಷ್ಟು ತುಪ್ಪ ಶ್ರೀಕಂಡಗಳನ್ನು ಬಡಿಸಲಾಗುತ್ತಿತ್ತು.
ಅಧಿವೇಶನದ ವಿವಿಧ ಘೋಷ್ಠಿಗಳು:ಗಾಂಧೀಜಿಯವರು ಬೆಳಗಾವಿಯನ್ನು ತಲುಪಿದ ನಂತರ ರೈಲಿನಿಂದ ಇಳಿದು ತಕ್ಷಣ ಭಾಗಿ ತಮ್ಮ ಹಣೆಯನ್ನು ಬೆಳಗಾವಿ ಮಣ್ಣಿಗೆ ಸ್ಪರ್ಶಿಸಿದರು. 9429ನೇ ನಂಬರಿನ ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಹಿಂದಿನ ಅಂದರೆ ಆಂಧ್ರದ ಕಾಕಿನಾಡದ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವವರು ಗಾಂಧೀಜಿಯವರನ್ನು ಅಧಿವೇಶನದ ಸ್ಥಳಕ್ಕೆ ಕರೆದುಕೊಂಡು ಬಂದರು.ಬೆಳಗಾವಿಯಲ್ಲಿ ಪ್ರಥಮ ಬಾರಿಗೆ ರಾಷ್ಟ್ರೀಯ ಧ್ವಜಾರೋಹಣದೊಂದಿಗೆ ಅಧಿವೇಶನದ ಪ್ರಾರಂಭ,ಹೂಸ ಸಂಪ್ರದಾಯಕ್ಕೆ ಮುನ್ನುಡಿ : ಈ ಹಿಂದಿನ ಸಂಪ್ರದಾಯಗಳನ್ನು ಮುರಿದು ರಾಷ್ಟ್ರೀಯ ದ್ವಜಾರೋಹಣದೂಂದಿಗೆ ಕಾಂಗ್ರೆಸ್ ಅಧಿವೇಶನಕ್ಕೆ ಚಾಲನೆ ನೀಡಿದ್ದು ಬೆಳಗಾವಿಯಲ್ಲಿಯೇ ಪ್ರಥಮ .ಇದು ಮುಂದಿನ ಅಧಿವೇಶಗಳಿಗೆ ಒಂದು ಪಾಠವಾಗಿ ಮನೋಭೂಮಿಕೆಯಾಗಿ ಪ್ರಾರಂಭವಾಯಿತು 21.12.1924 ರಿಂದ 30.12.1924ರ ವರೆಗೆ ದಿನಗಳ ಕಾಲ ಅಧಿವೇಶನ ಜರುಗಿತು.
ಗಂಗುಬಾಯಿ ಹಾನಗಲ್ ಅವರಿಂದ ಪ್ರಾರ್ಥನೆ: ಪ್ರಾರಂಭದಲ್ಲಿ ಗಂಗೂಬಾಯಿ ಹಾನಗಲ್ ಅವರು ಬೆಳಗ್ಗೆ 11:00ಗೆ ಒಂದೇ ಮಾತರಂ ಮತ್ತು ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂಬ ಗೀತೆಯನ್ನು ಮೋಹನರಾಗ ಮತ್ತು ಜಂಪೆ ತಾಳದಲ್ಲಿ ಸುಶ್ರಾವ್ಯವಾಗಿ ಹಾಡು ಮೂಲಕ ಸಭೀಕರ ಮೆಚ್ಚುಗೆ ಪಡೆದರು ಆಗ ಗಂಗೂಬಾಯಿ ಹಾನಗಲ್ ಅವರ ವಯಸ್ಸು ಕೇವಲ 13 ಮಾತ್ರ.ಡಿಸೆಂಬರ್ 21ರಿಂದ 23ರವರೆಗೆ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತು. ಕರ್ನಾಟಕ ಏಕೀಕರಣದ ಪ್ರಥಮ ಅಧಿವೇಶನ ಇದೆ ವೇದಿಕೆಯಲ್ಲಿ ಜರುಗಿತು ಸರ್ ಸಿದ್ಧಪ ಕಂಬಳಿ ಅವರು ಕರ್ನಾಟಕ ಏಕೀಕರಣ ಪರಿಷತ್ತಿನ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.ದಿನಾಂಕ 27ರಂದು ಪಂಡಿತ್ ಮದನ್ ಮೋಹನ್ ಮಾಳವಿಯ ಅವರ ಅಧ್ಯಕ್ಷತೆಯಲ್ಲಿ ಹಿಂದೂ ಮಹಾಸಭಾ ಅಧಿವೇಶನವು ಜರಗಿತು.ದಿನಾಂಕ 28ರಂದು ಸಾಮಾಜಿಕ ಸಮ್ಮೇಳನವು ಅರ್ಕಾಟ ರಾಮಸ್ವಾಮಿ ಮೊದಲಿಯಾರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತ್ತು. ಶಿಕ್ಷಣ ಸಾಮಾಜಿಕ ಸಮಾನತೆ ಬ್ರಿಟಿಷ್ ಕಾಯ್ದೆಗಳು, ನ್ಯಾಯಾಡಳಿತ ಹಿರಿಮೆಯನ್ನು ಕುರಿತು ವಿಚಾರಗಳನ್ನು ಮಂಡಿಸಲಾಯಿತು.ದಿನಾಂಕ 29 ರಂದು ಅಖಿಲ ಭಾರತ ಸಾಮಾಜಿಕ ಸಮ್ಮೇಳನ ಶಂಕರ ನಾಯರ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ದಿನಾಂಕ 30 ರಂದು ಅಖಿಲ ಭಾರತ ಸಂಸ್ಥಾನಗಳ ಸಮ್ಮೇಳನ ಜರುಗಿತು ಸಂಸ್ಥಾನದ ಗಳಲ್ಲಿ ಜವಾಬ್ದಾರಿ ಸರ್ಕಾರಗಳು ಎಂಬ ವಿಷಯ ಕುರಿತು ಎನ್ ಪಿ ಕೇಳ್ಕರ್ ಅವರು ಮಾತನಾಡಿದರು.
ಗಾಂದೀಜೀಯವರ ಅಧ್ಯಕ್ಷಿಯ ಭಾಷಣ:ಅಧ್ಯಕ್ಷೀಯ ಮಾತುಗಳನ್ನು ಆಡಿದ ಮಾತಗಳನ್ನು ಆಡಿದ ಗಾಂಧೀಜಿಯವರು ಧರ್ಮಗಳನ್ನು ರಾಷ್ಟ್ರಗಳಂತೆ ತೂಗಿ ಅಳೆಯಬೇಕು ಅನ್ಯಾಯ ಅಧರ್ಮ ಮತ್ತು ಹಿಂಸೆಗಳನ್ನು ಆಚರಿಸುವ ರಾಷ್ಟ್ರಗಳು ನಶಿಸಿ ಹೋಗುವಂತೆ ಅನ್ಯಾಯ ಅಧರ್ಮವನ್ನು ಆಚರಿಸುವ ಧರ್ಮಗಳು ನಶಿಸಿ ಹೋಗುತ್ತವೆ ಎಂದು ಗಾಂಧೀಜಿಯವರು ಹೇಳಿದರು. ಸ್ವರಾಜ್ಯ ಸ್ಥಾಪನೆಗೆ ಅಸ್ಪೃಶ್ಯತೆ ಒಂದು ಅಡ್ಡಿ ಎಂದು ಗಾಂಧೀಜಿಯವರು ಒತ್ತಿ ಹೇಳಿದರು ಗಾಂಧೀಜಿಯವರು ತಮ್ಮ ಭಾಷಣದಲ್ಲಿ ದಯವೇ ಧರ್ಮದ ಮೂಲ ಎಂಬ ಉದ್ದರಿಸಿದ್ದನ್ನು ನೋಡಿದರೆ ಅವರಿಗೆ ಬಸವಣ್ಣನವರ ವ್ಯಕ್ತಿತ್ವದ ಬಗೆಗೆ ತಿಳಿದುಕೊಂಡಿದ್ದರು ಎಂದಾಗುತ್ತದೆ .ಹರ್ಡೇಕರ ಮಂಜಪ್ಪನವರು ತಾವು ಬರೆದ ಸತ್ಯಾಗ್ರಹಿಬಸವೇಶ್ವರ ಎಂಬ ಚಿಕ್ಕ ಪುಸ್ತಕವನ್ನು “ಬಿಡೇ ಲಕ್ಷ್ಮಣರಾಯರಿಂದ” ಹಿಂದಿ ಮತ್ತು ಮರಾಠಿ ಭಾಷೆಗೆ ತರ್ಜಮೆ ಮಾಡಿಸಿ ಗಾಂಧೀಜಿ ಸೇರಿದಂತೆ ಇನ್ನುಳಿದ ಎಲ್ಲ ನಾಯಕರಿಗೆ ಉಚಿತವಾಗಿ ಹಂಚಿದ್ದರು.
ಬೆಳಗಾವಿ ಅಧಿವೇಶನದ ಟರಾವುಗಳು: ಕಾಂಗ್ರೆಸ್ ಸಂಸ್ಥೆಗೆ ಆಯ್ಕೆಗೊಂಡ ಸದಸ್ಯರು ಪ್ರತಿ ತಿಂಗಳು ಆರು ಸಾವಿರ ಅಡಿ ಖಾದಿ ನೂಲನ್ನು ನೋಲಬೇಕು ಮತ್ತು ಕಾಂಗ್ರೆಸ್ಸಿಗರೆಲ್ಲ ಖಾದಿ ಬಟ್ಟೆಯನ್ನೇ ಧರಿಸಬೇಕುಅಸ್ಪಶ್ಯತೆಯನ್ನು ಹೋಗಲಾಡಿಸಲು ಶ್ರಮಿಸಬೇಕು ಮತ್ತು ಅದು ನಮ್ಮಿಂದಲೇ ಪ್ರಾರಂಭವಾಗಬೇಕುರಾಷ್ಟ್ರೀಯ ಹಾಗೂ ಸಾರ್ವಜನಿಕ ಸೇವೆಗಾಗಿ ಸಂಬಳ ಪಡೆದರೆ ಅದು ತಪ್ಪಲ್ಲ .ಸರೋಜಿನಿ ನಾಯ್ಡು, ಮುಂತಾದವರನ್ನು ವಿದೇಶಗಳಲ್ಲಿ ಭಾರತದ ಸ್ವಾತಂತ್ರ್ಯ ಚಳುವಳಿಯನ್ನು ಪ್ರಚಾರ ಮಾಡಿದ್ದಕ್ಕೆ ಸತ್ಕರಿಸಲಾಯಿತು.
ಅಧಿವೇಶನದ ಫಲಶ್ರುತಿ:ಕಾಂಗ್ರೆಸ್ ನೊಂದಿಗೆ ಮುನಿಸಿಕೊಂಡಿದ್ದ ಸ್ವರಾಜ್ ಪಕ್ಷದವರನ್ನು ಕಾಂಗ್ರೆಸ್ ನೊಂದಿಗೆ ಒಂದುಗೂಡಿಸಿತು. ಆ ಮೂಲಕ ಐಕ್ಯತಾ ಸಮ್ಮೇಳನವೆಂಬ ಖ್ಯಾತಿಗೆ ಪಾತ್ರವಾಯಿತು. ಸಿ ಆರ್ ದಾಸ್ ಅವರಿಗೆ ಸ್ವರಾಜ್ ಪಕ್ಷವನ್ನು ಕಟ್ಟಲು ಗಾಂಧೀಜಿಯವರು ಅನುಮತಿ ನೀಡಿದರು. ಕರ್ನಾಟಕ ಏಕೀಕರಣ ಎಂಬ ಸಂಸ್ಥೆ ಈ ಅಧಿವೇಶನದಲ್ಲಿಯೇ ಸ್ಥಾಪಿಸಲಾಯಿತು ಮುಂದೆ ಕರ್ನಾಟಕ ಏಕೀಕರಣ ಸಂಘವಾಗಿ ಸ್ವಾತಂತ್ರ್ಯದ ಜೊತೆಗೆ ಏಕಕಾಲಕ್ಕೆ ಏಕೀಕರಣ ಏಕೀಕರಣ ಸಂಘ ಹೋರಾಡಿತು.
ಬೆಳಗಾವಿ ಅಧಿವೇಶನದ ಖರ್ಚು ವೆಚ್ಚಗಳು: ಬೆಳಗಾವಿ ಅಧಿವೇಶನಕ್ಕೆ 2,20,829 ರೂಪಾಯಿ 5ಆಣೆ 6 ಪೈಸೆ ಖರ್ಚಾಯಿತು. ಕಾಂಗ್ರೆಸ್ ಅಧಿವೇಶನದಲ್ಲಿ ಕೂಡುವ ಪ್ರತಿನಿಧಿ ಶುಲ್ಕದ ಒಂದು ಭಾಗವನ್ನು ಅಖಿಲ ಭಾರತ ಕಾಂಗ್ರೆಸ್ ಕಮಿಟಿಗೆ ಕೊಡಬೇಕಾಗಿತ್ತು. ಅಧಿವೇಶನ ಮುಗಿದ ದಿನವೇ ಗಂಗಾಧರ ರಾವ್ ದೇಶಪಾಂಡೆ ಅವರು 8,000 ಗಳ ಚೆಕ್ಕನ್ನು ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಕೋಶಾಧ್ಯಕ್ಷರಾಗಿದ್ದ ಜಮುನಾಲಾಲ್ ಬಜಾಜ್ ಅವರ ಕೈಗೆ ನೀಡಿದರು. ಅಧಿವೇಶನದ ಖರ್ಚು ವೆಚ್ಚಗಳನ್ನು ಕಳೆದು ರೂ.30,000 ಉಳಿತಾಯವಾಗಿತ್ತು. ಈ ಹಣವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಗೆ ಅದರ ಕಾರ್ಯ ಚಟುವಟಿಕೆಗಳಿಗೆ ನೀಡಲಾಯಿತು.
ಅಧಿವೇಶನದ ಮಹತ್ವ:ಪತ್ರಿಕೆಯಲ್ಲಿ ಹೆಸರು ಕೇಳಿದ್ದ ರಾಷ್ಟ್ರೀಯ ನಾಯಕರನ್ನೆಲ್ಲ ಪ್ರತ್ಯಕ್ಷವಾಗಿ ನೋಡುವ ಅವಕಾಶ ದೊರೆಯಿತು.ಎನ್ ಎಸ್ ಹರ್ಡೆಕರ ಅವರಿಂದ ತರಬೇತಿ ಪಡೆದ ಸೇವಾದಳದ ಕಾರ್ಯಕರ್ತರು ಅಧಿವೇಶನದ ಯಶಸ್ವಿಗೆ ಅಹರ್ನಿಸಿ ದುಡಿದರು. ಇದು ರಾಷ್ಟ್ರೀಯ ನಾಯಕರ ಮೆಚ್ಚುಗೆಗೆ ಪಾತ್ರವಾಯಿತು .ಇದರಿಂದ ನಾ.ಸು.ಹರ್ಡೇಕರ ರಾಷ್ಟ್ರೀಯ ನಾಯಕರಾಗಿ ಬೆಳೆಯಲು ಅಧಿವೇಶನ ವೇದಿಕೆಯಾಯಿತು.ಶೌಚಕೋಪ ಮತ್ತು ಸ್ವಚ್ಛತೆ ವ್ಯವಸ್ಥೆಯ ಮೇಲ್ವಿಚಾರಣೆ ಜವಾಬ್ದಾರಿ ಹೊತ್ತ ಕಾಕಾ ಸಾಹೇಬ ಕಾಲೇಕರ ಅವರು ಭಂಗಿ ಬೆಳೆಯುವುದು ಶೂದ್ರರ ಕೆಲಸ ಎನ್ನುವ ತಪ್ಪು ಸಂದೇಶವನ್ನು ನಾವು ಹೋಗಲಾಡಿಸಬೇಕು. ಅದಕ್ಕಾಗಿ ಮೇಲ್ವರ್ಗದವರೆಂದು ಕರೆಸಿಕೊಳ್ಳುವ ನಾವೇ ಮಾಡಬೇಕು ಎಂಬ ಸೂಚನೆಯನ್ನು ಮುಂದೆ ಇಟ್ಟಾಗ ಮೇಲ್ವರ್ಗದ ಹಲವಾರು ಯುವಕರು ಮುಂದೆ ಬಂದು ಈ ಕೆಲಸವನ್ನು ಮಾಡಿದರು ಈ ಮೂಲಕ ಅಸ್ಪೃಶ್ಯತೆ ನಿವಾರಣೆ ಮತ್ತು ಶ್ರಮ ಗೌರವದ ಮಹತ್ವವನ್ನು 1924ರ ಕಾಂಗ್ರೆಸ್ ಅಧಿವೇಶನ ಒತ್ತಿ ಹೇಳಿತು.
ಅಧಿವೇಶನ ದ ಸಾಮಾಜಿಕ ಪ್ರಭಾವ :ಕಾಂಗ್ರೆಸ್ ಪಕ್ಷ ಬ್ರಾಹ್ಮಣರ ಸಂಸ್ಥೆ ಎಂದು ನಂಬಿ ಅದರ ಚಟುವಟಿಕೆಗಳಿಂದ ದೂರ ಉಳಿದಿದ್ದ ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯ ಅಧಿವೇಶನದಿಂದ ಕಾಂಗ್ರೆಸ್ ಗೆ ಹತ್ತಿರವಾದರು. ಹರ್ಡೇಕರ್ ಮಂಜಪ್ಪನವರು ಬಸವೇಶ್ವರ ಸೇವಾದಳ ಅಧಿವೇಶನದಲ್ಲಿ ಸ್ವಯಂ ಕಾರ್ಯಕರ್ತರಾಗಿ ದುಡಿದು ಅಧಿವೇಶನದ ಯಶಸ್ವಿಗೆ ಪ್ರಯತ್ನಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು ಹರ್ಡೇಕರ್ ಮಂಜಪ್ಪನವರು ರಾಷ್ಟ್ರೀಯ ನಾಯಕರಾಗಿ ಸಾಮಾಜಿಕ ಚಿಂತಕರಾಗಿ ಈ ನಾಡಿಗೆ ಅಧೀವೇಶನದ ಮೂಲಕ ಹೊರಹೊಮ್ಮಲ್ಪಟ್ಟರು.
ಕೆ.ಎಲ್.ಇ.ಸಂಸ್ಥೆಯ ಸಪ್ರರ್ಷಿಗಳಲ್ಲಿ ಒರ್ವರಾದ ಸರ್ದಾರ್ ವೀರನಗೌಡ ಪಾಟೀಲ ಶಿಕ್ಷಕರಾಗಿ ಶಿಕ್ಷಣ ಪ್ರೇಮಿಗಳಾಗಿದ್ದರು .ಬೆಳಗಾವಿಯಲ್ಲಿ ಹರಿಜನ ವಿದ್ಯಾರ್ಥಿಗಳಿಗೆ ವಸತಿ ನಿಲಯವನ್ನು ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಗಾಂಧೀಜಿಯವರು ವಸತಿ ನಿಲಯಕ್ಕೆ ಭೇಟಿ ನೀಡಿ ವೀರನಗೌಡ ಪಾಟೀಲರ ಕಾರ್ಯವನ್ನು ಶ್ಲಾಘಿಸಿದರು. ನಿಮ್ಮದು ಶ್ರೇಷ್ಠ ಮಟ್ಟದ ದೇಶ ಸೇವೆ ಇದನ್ನು ಮುಂದುವರಿಸಿ ಎಂದು ಗಾಂಧೀಜಿಯವರು ಸರ್ದಾರ್ ವೀರನಗೌಡ ಪಾಟೀಲ ಅವರಿಗೆ ಹೇಳಿದರು ಇದರ ಅರ್ಥ ಹರಿಜನ ಸೇವೆ ರಾಷ್ಟ್ರಭಕ್ತಿಯ ಭಾಗ ಎಂಬುದು ಗಾಂಧೀಜಿಯವರ ಅಭಿಮತವಾಗಿತ್ತು.
ಗಾಂಧೀಜಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿರುವುದು ಇತಿಹಾಸದಲ್ಲಿ ಒಂದು ಸಾರಿ ಮಾತ್ರ ಅದು ಬೆಳಗಾವಿಯಲ್ಲಿ ಆ ಬೆಳಗಾವಿಯ ಗಾಂಧೀಜಿ ಅಧ್ಯಕ್ಷತೆಯ ಕಾಂಗ್ರೆಸ್ ಅಧಿವೇಶನಕ್ಕೆ ಶತಮಾನದ ಸಂಭ್ರಮ ಆ ನೆಟ್ಟಿನಲ್ಲಿ ಒಂದು ಸಾರಿ ಒಂದಿನ ಅಧಿವೇಶನದ ಸ್ವರೂಪವನ್ನು ಮೆಲುಕು ಹಾಕುವ ಚಿಕ್ಕ ಪ್ರಯತ್ನವಷ್ಟೇ.