Home ಅಧ್ಯಾತ್ಮ ಚನ್ನಮ್ಮನ ಕಿತ್ತೂರಿನಲ್ಲಿ ಬಸವ ಜ್ಯೋತಿ ಕಾರ್ಯಕ್ರಮಕ್ಕೆ ಚಾಲನೆ: ವಿಶ್ವಗುರು ಬಸವಣ್ಣನವರ ತತ್ವಗಳ ಪ್ರಚಾರಕ್ಕೆ ಮನೆ-ಮನೆಗೆ ಜ್ಯೋತಿ

ಚನ್ನಮ್ಮನ ಕಿತ್ತೂರಿನಲ್ಲಿ ಬಸವ ಜ್ಯೋತಿ ಕಾರ್ಯಕ್ರಮಕ್ಕೆ ಚಾಲನೆ: ವಿಶ್ವಗುರು ಬಸವಣ್ಣನವರ ತತ್ವಗಳ ಪ್ರಚಾರಕ್ಕೆ ಮನೆ-ಮನೆಗೆ ಜ್ಯೋತಿ

0

ಚನ್ನಮ್ಮನ ಕಿತ್ತೂರು: ಚನ್ನಮ್ಮನ ಕಿತ್ತೂರಿನಲ್ಲಿ ರಾಷ್ಟ್ರೀಯ ಬಸವ ದಳದ ಆಶ್ರಯದಲ್ಲಿ ಬಸವ ಜ್ಯೋತಿ ಕಾರ್ಯಕ್ರಮಕ್ಕೆ ಇಂದು ವಿಜೃಂಭಣೆಯಿಂದ ಚಾಲನೆ ನೀಡಲಾಯಿತು.

ಚನ್ನಮ್ಮನ ಕಿತ್ತೂರು ರಾಷ್ಟ್ರೀಯ ಬಸವ ದಳದ ನೇತೃತ್ವ ಕೂಡಲ ಸಂಗಮ ಮಹಾಪೀಠದ ಶ್ರೀ ಪ್ರಭುಲಿಂಗ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಈ ಕಾರ್ಯಕ್ರಮ ಆರಂಭಗೊಂಡಿದ್ದು ಒಂದು ತಿಂಗಳ ಕಾಲ ಮನೆ-ಮನೆಗೆ ತೆರಳಿ ಬಸವಣ್ಣನವರ ತತ್ವಗಳನ್ನು ಪ್ರಚಾರ ಮಾಡುವ ಉದ್ದೇಶವನ್ನು ಹೊಂದಿದೆ.

ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಅಶೋಕ ಅಳ್ನಾವರ ಮಾತನಾಡುತ್ತಾ, 12ನೇ ಶತಮಾನದಲ್ಲಿ ಧರ್ಮದಲ್ಲಿ ಕ್ಷಯ ಉಂಟಾದಾಗ ಅದನ್ನು ಶುದ್ಧೀಕರಿಸಲು ಬಸವಣ್ಣನವರು ಭೂಮಿಗೆ ಬಂದರು. ಕೆಲವು ಪಟ್ಟಭದ್ರ ಹಿತಾಶಕ್ತಿಗಳು ಬಸವಣ್ಣನವರನ್ನು ಎತ್ತು ಎಂದು ನಂಬಿಸಿದ್ದರು ಅಂಥವರಿಗೆ ಬುದ್ದಿ ಕಲಿಸುವ ಸಮಯ ಬಂದಿದೆ. “ಬಸವಣ್ಣನವರ ಧರ್ಮ ಗುರು ಅಲ್ಲ, ಧರ್ಮದ ಪ್ರಚಾರಕರು ಎಂಬ ಭ್ರಾಂತಿಯನ್ನು ತಡೆಯುವ ಸಮಯ ಬಂದಿದೆ. ಈ ಕಾರ್ಯಕ್ರಮವು ಒಂದು ತಿಂಗಳ ಕಾಲ ನಡೆಯಲಿದ್ದು, ಪ್ರತಿ ಮನೆಗೆ ತೆರಳಿ ಬಸವಣ್ಣನವರ ವಚನಗಳು, ತತ್ವಗಳು ಮತ್ತು ಸಾಮಾಜಿಕ ಸುಧಾರಣೆಯ ಸಂದೇಶವನ್ನು ತಲುಪಿಸಲಿದೆ. ಶರಣರ ಆದರ್ಶಗಳನ್ನು ಜನರ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವ ಈ ಕಾರ್ಯಕ್ರಮವು, ಲಿಂಗಾಯತ ಸಮಾಜವನ್ನು ಬಸವ ಧರ್ಮದ ಕಡೆಗೆ ಮತ್ತಷ್ಟು ಸನಿಹಗೊಳಿಸುವ ಗುರಿಯನ್ನು ಹೊಂದಿದೆ ಎಂದ ಅವರು  ದೇವರನ್ನು ಹೊರಗೇ ಹುಡುಕದೇ ನಮ್ಮೊಳಗೆ ಕಂಡು ಕೊಂಡರೆ ನಿಜವಾದ ಶರಣ ಸಂಸ್ಕೃತಿಯನ್ನು ಅರಿಯಬಹುದು ಎಂದರು.

ಬಸವರಾಜ ಕಡೆಮನಿ ಮಾತನಾಡಿ ಬಸವ ಜ್ಯೋತಿಯು ಸಣ್ಣದಾದರೂ ಕತ್ತಲೆಯನ್ನು ದೂರ ಮಾಡುವ ಶಕ್ತಿಯನ್ನು ಹೊಂದಿದೆ. ಬಸವಣ್ಣನವರ ಪ್ರಭಾವಳಿಯಿಂದ ಬಂದ ಈ ಜ್ಯೋತಿಯು ಮನೆ-ಮನಗಳಲ್ಲಿರುವ ಕಲ್ಮಶವನ್ನು ತೊಡೆದು, ಜ್ಞಾನ ಮತ್ತು ಸದಾಚಾರವನ್ನು ಹರಡುತ್ತದೆ ಎಂದ ಅವರು ಈ ಜ್ಯೋತಿಯು ಸಾಂಕೇತಿಕವಾಗಿ ಮನುಷ್ಯರ ಒಳಗಿರುವ ಜ್ಞಾನದ ಬೆಳಕನ್ನು ಪ್ರಜ್ವಲಿಸುವ ಗುರಿಯನ್ನು ಹೊಂದಿದೆ ಎಂದರು

ಕೆಪಿಸಿಸಿ ಸದಸ್ಯೆ ಶರಣೆ ರೋಹಿಣಿ ಪಾಟೀಲ ಅವರು ಬಸವ ಧ್ವಜಾರೂಹಣ ಮಾಡಿ ಮಾತನಾಡಿ ಅನುಭವ ಮಂಟಪದಲ್ಲಿರುವ ವಾತಾವರಣವನ್ನು ಇಂದು ಮೇಟ್ಯಾಲ ಗ್ರಾಮದಲ್ಲಿ ನಿರ್ಮಾಣ ಮಾಡಲಾಗಿದೆ. ವಿಶ್ವಗುರು ಬಸವಣ್ಣನವರು ಮಹಿಳೆಯರಿಗೆ ಸಮಾನತೆಯನ್ನು ಕೊಟ್ಟ ಮಹಾನ್ ಸುಧಾರಕರು. ಇಂತಹ ಕಾರ್ಯಕ್ರಮಗಳು ಎಲ್ಲ ಗ್ರಾಮಗಳಲ್ಲಿ ನಡೆಯಬೇಕು. ನಾನು ಅಧಿಕಾರಕ್ಕಿಂತ ಶರಣ ಸಂಸ್ಕೃತಿಗೆ ಬೆಲೆ ಕೊಡುವವಳು. ಬಸವ ಸಂಸ್ಕೃತಿಯನ್ನು ಉಳಿಸಲು ದೊಡ್ಡ ಹೋರಾಟವೇ ಮಾಡಬೇಕಾಗಿದೆ ಎಂದ ಅವರು ಶರಣರ ವಾಣಿಯಿಂದ ಬಂದ ಸಂದೇಶಗಳು ನಿಜವಾಗುತ್ತವೆ ಎಂದು ಒತ್ತಿ ಹೇಳಿದರು.

ಕೂಡಲ ಸಂಗಮ ಮಹಾಪೀಠದ ಶ್ರೀ ಪ್ರಭುಲಿಂಗ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ, ಧರ್ಮದ ಕಡೆಗೆ ಜನ ಬಾರದಿದ್ದರೆ, ಧರ್ಮವೇ ಜನರ ಮನೆ-ಮನಕ್ಕೆ ತೆರಳಲಿ ಎಂಬ ಉದ್ದೇಶದಿಂದ ಲಿಂಗಾನಂದ ಮಹಾಸ್ವಾಮಿಗಳು ಮತ್ತು ಮಾತೆ ಮಹಾದೇವಿ ಅವರು ಈ ಬಸವ ಜ್ಯೋತಿ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. ಈ ಜ್ಯೋತಿಯ ಮೂಲಕ ಎಲ್ಲರೂ ಜ್ಞಾನದ ಬೆಳಕನ್ನು ಪಡೆದುಕೊಳ್ಳಬೇಕು. ವಚನಗಳಲ್ಲಿ ಅಪಾರ ಶಕ್ತಿಯಿದೆ. ಬಸವಣ್ಣನವರಿಗೆ ಶರಣಾಗಿ ಸಂಕಲ್ಪ ಮಾಡಿದರೆ ನಮಗೆ ಬೇಕಾದ ಗುರಿಯನ್ನು ಸಾಧಿಸುವ ಶಕ್ತಿ ದೊರೆಯುತ್ತದೆ ಎಂದ ಅವರು ಈ ಕಾರ್ಯಕ್ರಮವು ಸಂಸಾರದಿಂದ ಸದ್ಗತಿಯ ಕಡೆಗೆ ಕೊಂಡೊಯ್ಯುವ ಮಾರ್ಗವಾಗಲಿದೆ ಎಂದರು.

ಈ ವೇಳೆ ಶರಣರಾದ ಮಹಾದೇವ ನಂದಿಹಳ್ಳಿ, ಬಸವರಾಜ ಅವರಾದಿ, ನಾಗರಾಜ ಮಿರಜಗಿ, ಈರಣ್ಣ ಗಾಮನ್ನವರ, ಶಿಕ್ಷಕರಾದ ವೀರಭದ್ರ ನಂದಿಹಳ್ಳಿ ಸೇರಿದಂತೆ ಇನ್ನೂ ಅನೇಕ ಶರಣ ತಂದೆ ತಾಯಿಗಳಿದ್ದರು.

ಮಡಿವಾಳೆಪ್ಪ ಅಸುಂಡಿ ಅವರು ಬಸವ ನೆನೆಹು ಮತ್ತು ಕಾರ್ಯಕ್ರಮದ ನಿರೂಪಣೆ ಮಾಡಿದರು. ಶಿಕ್ಷಕರಾದ ಬಸವರಾಜ ಜಕಾತಿ ಅವರು ಸರ್ವರಿಗೂ ಶರಣು ಸಮರ್ಪಣೆ ಮಾಡಿದರು.

LEAVE A REPLY

Please enter your comment!
Please enter your name here